Thursday, August 23, 2018

ಪಥ

ಏಕೆ ಬದುಕುವ ನೆವವು
ಏಕೆ ಜೀವನದಾಸೆ
ಏಕೆ ಕನಸಿನ ತುಡಿತ
ಏಕೆ ಇರುವಿನ ಛಲವು

ದೇಹ ಭಂಗವಾದಾಗಿ
ಜೀವಿತವು ಕೊನೆಯಾಗಿ
ನಿಷ್ಕ್ರಮಣ ಕಾಲದಲಿ
ಏಕಾಯ್ತು ಒಲವು

ದೇಹದಿಂದಪಗಮನ
ಪರ ದೇಹಾಕಾಗಮನ
ಮೃತ್ತಿಕೆಯ ದೇಹಕ್ಕೆ
ಏಕೆ ಹಾತೊರೆಯು

ನಿರ್ಲಿಪ್ತ ನಿರ್ಭಾವ
ಮುಕ್ತಿಯನು ಕೈಚೆಲ್ಲಿ
ಅಂಟುಗಳ ಜಗದೆಡೆಗೆ
ಏಕಿಂಥ ಸೆಳೆವು

ವಿದಾಯವೀ ಭವರಥಕೆ
ಗಮನಿಸೈ ನಿಜಪಥಕೆ
ಮೋಕ್ಷವಿಹ ಮಾರ್ಗದಲಿ
ನಡೆ ಸತ್ಯದೆಡೆಗೆ

ಸಾಂತ್ವನವು ನಿನಗಿರಲಿ
ಶಾಂತಿಯದು ದೊರಕಿರಲಿ
ಸಂಗವನು ಮೀರಿರಲಿ
ಬಿಡುಗಡೆಯು ಸಿಗಲಿ


Tuesday, July 31, 2018

ಹಕ್ಕಿಯ ಪಯಣ

ವಿಫುಲ ಗಗನದ ತಳದಿ
ಇರುಳೊಡೆವ ಕಾಲದಲಿ
ನಸುಗೆಂಪು ಬೆಳಕಿನಲಿ
ಒಂಟಿ ಹಕ್ಕಿಯ ಪಯಣ

ಕತ್ತಲೆಯು ಪಸರುವುದೊ
ಬೆಳಕೆಲ್ಲಿ ಮರೆಯುವುದೊ
ಪಥವೆಲ್ಲಿ ಮಸುಕುವೊದೊ
ಎಂಬ ಭಯವುಂಟು

ಕಂದಗಳು ಕೊರಗುವವು
ಅಮ್ಮನಿರೆ ಮರುಗುವವು
ಗೂಡ ತಲುಪದೆ ಬಿಡೆನು
ಎಂಬ ಛಲವುಂಟು

ತನ್ನಮ್ಮ ಅನುದಿನದಿ
ತಿನ್ನಿಸಿದ ತಿನಿಸಿಂದ
ಕಸುವು ಹೊಂದಿದ ರೆಕ್ಕೆ
ಇನ್ನೆಂದಿಗುಂಟು

ವೇಗವನು ಇಮ್ಮಡಿಸಿ
ತಡೆಗಳನು ಕಡೆಗಣಿಸಿ
ಏಕ ನೋಟದಿ ಗುರಿಗೆ
ಸಾಗುತಿಹುದೀಗ

ತನ್ನ ಮುಂದಿನ ಯುಗಕೆ
ತಾನು ಕೊಟ್ಟೂಡುಗೊರೆಯು
ಕಾಯ್ದಿಟ್ಟು ಫಲಬರಲು
ಸಾರ್ಥಕ್ಯವುಂಟು

ತನಗೆ ಸಾರ್ಥಕ್ಯವುಂಟು

Saturday, July 28, 2018

ಶೋಧ

ಮುಗಿಲ ಮೇಲೆ ಮೋಡ ನಿಂತು
ಮಳೆಯ ನೀರು ಸುರಿಸದಿರಲು
ಹಸಿರು ತನಗೆ ಕೇಳುತಿಹುದು
ವರ್ಷಧಾರೆಗರೆಯಲು

ಸುತ್ತಲೆಲ್ಲ ಧಗೆಯು ಹರಡಿ
ತಾನು ಅದರ ಬಿಸಿಗೆ ಬೆಂದು
ಬಹುಳ ತಾಪದಿಂದ ನೊಂದು
ಅರಸುತಿಹುದು ತಂಪನು

ಬಹಳ ಕಾಲ ಸುಪ್ತವಿದ್ದ
ನೋವ ಗ್ರಹಿಕೆಯಳಿದು ಹೋದ
ಆಳವಾದ ಮನದ ಗಾಯ-
ಕೆಲ್ಲಿ ಮದ್ದು ಸಿಗುವುದು

ಅಂದು ಕಂಡ ಇನಿತು ಪ್ರೀತಿ
ಇಂದು ಇಲ್ಲಿ ಕಾಣದಿರಲು
ಮತ್ತೆ ಮನಸು ಹುಡುಕುತಿಹುದು
ಒಂದು ಒಲುಮೆಯೊಸರನು


ನನ್ನ ಕವಿತೆ


ಸಂಜೆಗೆಂಪಿನ ಮುಗಿಲ
ಮನ್ಮಥನ ಚಿತ್ತಾರ
ನೋಡುತಿಹ ಜೋಡಿಗಳ
ಪ್ರಣಯವೀ ಕವಿತೆ

ನಲ್ಮೆಯಿಂದಲಿ ನಲ್ಲೆ
ಕವಿಯ ಎದೆಗೊರಗಿರಲು
ಪ್ರೇಮ ಕೊರಲಿನ ಉಲಿಯು
ಈ ನನ್ನ ಕವಿತೆ

ಕವಿಯ ಹೃದಯವನರಿತು
ಪ್ರೇಯಸಿಯು ಉಸುರಿರುವ
ಮೆಲುದನಿಯ ಪಿಸುಮಾತು
ನನ್ನ ಈ ಕವಿತೆ

ಅವಳ ನಗುಮೊಗದಲ್ಲಿ
ಅರಳಿರುವ ಕಮಲದಲೇ
ಹೊಳಪಿರುವ ಕಣ್ಣುಗಳ
ಬೆಳಕು ಈ ಕವಿತೆ

ಪ್ರೀತಿಯಲಿ ಮಿಂದಂಥ
ಹೂವಂಥ ಮಿದುಮನದ
ಭಾವಬ್ಧಿಯಲಿ ಒಂದು
ಅಲೆಯು ಈ ಕವಿತೆ

ನಿರ್ಭಾವತೆಗೆ ಏರಿ
ತಪವ ಕೊಂಡಿಹ ಮುನಿಯ
ಕೊನೆಯ ಮೋಹದ ಕೊಂಡಿ
ಈ ನನ್ನ ಕವಿತೆ  

Thursday, July 12, 2018

ಮನ ನೀನು



ಅಗೆದಷ್ಟು ಗಹನವಾಗುತಿಹೆ ಮನ ನೀನು

ಮಂಜು ಕವಿದಂದದಿ ಅಸ್ಪಷ್ಟ ನೀನು



ತೆಗೆದಷ್ಟು ನಿಧಿ ಬತ್ತದಂತಿಹೆ ನೀನು

ಮೊಗೆದಷ್ಟು ಸುಪ್ತ ರತ್ನಗಳ ಗಣಿ ನೀನು



ಅರೆದಷ್ಟು ಪುಡಿಯಾದ ಸೂಕ್ಷ್ಮ ನೀನು

ಅಂಧಕಾರದಿ ಬೆಳಕ ಭ್ರಮೆಯು ನೀನು



ಬಗೆದಷ್ಟು ಬಯಕೆಗಳ ಹುಟ್ಟು ತವರು ನೀನು

ಕಾಮ ಕ್ರೋಧಗಳಿಗಾಕಾರನು ನೀನು



ನಿನ್ನಲ್ಲಿ ಭಕ್ತಿ ಭಾವ ಪರವಶತೆಯುಂಟು

ನಿನ್ನಲ್ಲಿ ಭಯ ಅಹಂಕಾರಗಳು ಉಂಟು



ಹಂಸ ತೂಲಿಕ ತಲ್ಪ-ದಲಿ ದುಃಖ ಕೊಡಬಲ್ಲೆ

ಕಲ್ಲು ಹಾದಿಯ ಮೇಲೆ ಸುಖವ ಕೊಡಬಲ್ಲೆ



ಅಳೆದಷ್ಟು ಅಳೆದಿಲ್ಲದಂತಿರುವೆ ಎಲೆ  ಮನವೆ

ತಿಳಿದಷ್ಟು ತಿಳಿದಿಲ್ಲದಂತಿರುವೆ ನೀನು



ಎಲೆ ನಿಗೂಢನೆ ನೀನು ಎನ್ನಯ ಮನವೇ

ಎಂತು ಮೂಢನು ನಾನು ನಿನ್ನನರಿಯೆ

Sunday, July 8, 2018

ಬೇಕಾದವರು

ಕವಿತೆಯನು ಪರಿಕಿಸುವ
ಮೃದು ಹೃದಯವು ಬೇಕು

ಕವಿಯ ಮನಸನು ಅಗೆವ
ಸಾಧಕರು ಇರಬೇಕು

ತಿದ್ದಿ ತೀಡಲು ಒಬ್ಬ
ಕಟುವಿಮರ್ಶಕ ಬೇಕು

ಕಾವ್ಯ ಗಂಧವನರಿತ
ಸುಮನಸರು  ಇರಬೇಕು

ಕವನ ತಥ್ಯವನಳೆಯೆ
ಚಿಂತಕನೂ ಬೇಕು

ಅಂತರಂಗವನರಿವ
ಸಹನಶೀಲರು ಬೇಕು

ಕಿಂಚಿತ್ತು ಬಿನದವಿರೆ
ನಸುನಗುವರಿರಬೇಕು

ಇನಿತು ವಿಷಾದಕ್ಕೆ
ಮನಮಿಡಿವರಿರಬೇಕು

ಗಹನ ಚಿತ್ತದ ಒಸರ
ಹೀರುವರು ಇರಬೇಕು

ಕವಿಯ  ಮನಸಿನ ಗುರಿಯ
ಹಂಬಲಿಸುವರು  ಬೇಕು


Tuesday, July 3, 2018

ಕವಿತೆಯ ಉಗಮ

ಭಾವಲಹರಿಯು ತನ್ನ ಗುರಿಯೆಡೆಗೆ
ಪಯಣಿಸಲು, ತೊಡರುಗಳು ಒದಗಿದರೆ, ಉಗಮವೀ ಕವಿತೆ

ಮನೆಯ ಬೇಕನು ತಣಿಸಿ ಉಳಿದ ಕ್ಷೀರದ
ಮೊಸರ, ಮಂಥನದಿ ಪಡೆಯುವಾ ಬೆಣ್ಣೆಯಂತೆ

ಗಮ್ಯ ತಾಣದ ಕುರಿತು ಒಯ್ಯುವಾ
ರಥ ಮುರಿದು, ಬಿದ್ದ ಕಾಲದಿ ಬಂದ ವಿಮಾನದಂತೆ

ಕಾಲಮೋಡವು ತನ್ನ ದಾರಿಯಲಿ
ಬೆಟ್ಟವಿರೆ, ಅಳಿದು ಇಳೆಗೊರಗುವಾ ಸೋನೆಮಳೆಯಂತೆ

ನಿತ್ಯ ಹೂಡುವ ವೇಷ ಜನರ
ರಂಜಿಸದಿರಲು, ಮಾಂತ್ರಿಕನು ಹೊಸರೂಪ-ವನು ಧರಿಸುವಂತೆ

ಭಾವನಲಹರಿಯು ತನ್ನ ಪ್ರಕಟಣೆಗೆ
ಹವಣಿಸಲು, ಅಡ್ಡಿಗಳು ಬಂದಾಗ, ಉದಯವೀ ಕವಿತೆ