Saturday, June 30, 2018

ಸಾಧನೆಯ ಫಲ

ಕಲ್ಲುಗಳ ಹಾದಿಯಲಿ ಕಾಲ ಸವೆದೆನು ನಾನು
ಮುಳ್ಳುಗಳ ಹಾದಿಯಲಿ ಪಾದ ಸವರಿದೆ ನಾನು

ಸಾಧನೆಯ ನಿಜಪಥದಿ ಸುಖವ ತ್ಯಜಿಸಿದೆ ನಾನು
ಗಮಿತವ್ಯ ಸಂಧಿಸಲು ನಿರತ ನಡೆದೆನು ನಾನು

ಇಂದೆನ್ನ ಶ್ರಮದ ಫಲ ಸಿಗುವ ಕಾಲವು ಬಂದು
ಆನಂದ ಬಾಷ್ಪಗಳು ಕಣ್ಣ ಸಂದಲಿ ನಿಂದು

ರೋಮ ರೋಮಗಳೆಲ್ಲ ಹರ್ಷವರ್ಷದಿ ಮಿಂದು
ಭಾವ ಉತ್ಕರ್ಷದಲಿ ಪುಳಕಿತನು ನಾನಿಂದು

ಅದಿರು ಬಿಸಿಯಲಿ ಬೆಂದು ಚಿನ್ನವಾಯಿತು ಕಡೆಗೆ
ಹೊರಳುತಿದೆ ಈ ಪಯಣ ಭವ್ಯ ಭವಿತದ ನಡೆಗೆ

ನಿಜಪಥ

ಭಾವನೆಗಳೇ ಕರಗಿ ಹೋಗಿ  ಕೊರಳ ನಾದ ಉಲಿಯಲಿ 
ಕಾಮನೆಗಳೇ ಕಳೆದು ಹೋಗಿ ಸಲಿಲ ನಾದ ಲಯದಲಿ 

ಬೆಟ್ಟಗಳೇ ಸರಿದು ಹೋಗಿ ಮರುತ ವೇಗ ತಳೆಯಲು 
ಕಲ್ಲುಗಳೇ ಒಡೆದು ಹೋಗಿ ಒಸರ ನೀರು ಹರಿಯಲು 

ಬಂಧಗಳೇ ಕಡಿದು ಹೋಗಿ ಎನ್ನ ಮುಕ್ತಗೊಳಿಸಲು 
ಇಹದ ನಂಟು ಹರಿದು ಹೋಗಿ ಭವವ ಮೀರಿ ಬೆಳೆಯಲು 

ಎನ್ನ ನಿಜವ ತಿಳಿಯಲು 


Monday, June 4, 2018

ಕವಿಯ ಪುನರ್ಜನ್ಮ

ಮಲಗಿದ್ದ ಕೋಗಿಲೆಯು
ಮೈಗೊಡವಿ  ಮೇಲೆದ್ದು
ಕೊರಳ ನಾದವ ಕೂಗೆ
ದನಿಯನನುಗೊಳಿಸುತಿದೆ

ದುಂಡುಮಲ್ಲಿಗೆ ಮೊಗ್ಗು
ಜಾವವಾಯಿತು ಎಂದು
ತನ್ನ ಕಂಪನು ಬೀರೆ
ಅರಳ ಹೊರಡುತಿದೆ

ವರುಷಗಳದುಮಿಟ್ಟ
ಭಾವಗಳ ಕೊಡವೊಂದು
ಬಿರುಕೊಡೆದು ಸಂದಿಯಲಿ
ಹನಿಯು ಜಿನುಗುತಿದೆ

ತಾರೆ ಚಂದಿರ ಬಾನ
ಸ್ವಪ್ನಲೋಕದಿ ನೋಡಿ
ಪುಳಕಿತನ ಕವಿಯ ಕನ
ಸೊಡೆವ ಸಮಯವಿದೆ

ಪ್ರಕೃತಿಯಾಕೃತಿಯೊಂದು
ಒಣಗಿದ್ದ ಕವಿಮರದ 
ಜಡವಳಿಸಿ ಮಿಡಿಮಿಡಿವ
ಜೀವ ಹೂಡುತಿದೆ

ತನ್ನ ಜೀವ ಹೂಡುತಿದೆ